ಬ್ಯಾಲ್, ಪಿಯರಿ
	1647-1706. ಫ್ರೆಂಚ್ ತತ್ತ್ವಜ್ಞಾನಿ, ಹುಟ್ಟಿದ್ದು ಈಗಿನ ಕಾರ್ಲಾಬೇಲ್‍ನಲ್ಲಿ. ತಂದೆ ಕ್ಯಾಲ್ವನಿಸ್ಟ್ ಕ್ರೈಸ್ತ ಪಂಗಡದ ಧರ್ಮಬೋಧಕ. ಈತ ಟುಲೂಸ್‍ನಲ್ಲಿ ಜೆಸೂಟರ ಬಳಿ ತತ್ತ್ವಶಾಸ್ತ್ರಾಧ್ಯಯನ ಮಾಡಿ 1669ರಲ್ಲಿ ಕ್ಯಾತೊಲಿಕ್ ಕ್ರೈಸ್ತನಾದ. ಆದರೆ ಮರುವರ್ಷವೇ ಮತ್ತೆ ಕ್ಯಾಲ್ವನಿಸ್ಟ್ ಆದ. ಇದರಿಂದಾಗಿ ಒದಗಬಹುದಾಗಿದ್ದ ಧಾರ್ಮಿಕ ಶಿಕ್ಷೆ, ಖಂಡನೆಗಳನ್ನು ತಪ್ಪಿಸಿಕೊಳ್ಳಲು ಜಿನೀವಾ ಸರೋವರ ತೀರದ ಕಾಪೆಟ್‍ಗೆ ಹೋಗಿ ನೆಲಸಿದ. ಡೆಗಾರ್ಟೆಯ ತತ್ತ್ವ ವಿಚಾರಗಳನ್ನು ಅಧ್ಯಯನ ಮಾಡಿ ಕಾರ್ಟೀಸಿಯನ್ ತತ್ತ್ವಗಳ ಪರಿಚಯ ಮಾಡಿಕೊಂಡ. ಅನಂತರ ಫ್ರಾನ್ಸಿಗೆ ಹಿಂತಿರುಗಿ 1675ರ ತನಕ ಟ್ಯೂಟರ್ ಆಗಿದ್ದ. 1675ರಲ್ಲಿ ಸೆಡಾನ್ ಪ್ರಾಟೆಸ್ಟೆಂಟ್ ಅಕಾಡೆಮಿಯ ತತ್ತ್ವಶಾಸ್ತ್ರ ಪೀಠಕ್ಕೆ ಪ್ರಾಧ್ಯಾಪಕನಾಗಿ ನೇಮಕಗೊಂಡ. 1681ರಲ್ಲಿ ರಾಟರ್ ಡ್ಯಾಮ್‍ನಲ್ಲಿ ಪ್ರಾಧ್ಯಾಪಕನಾದ.

	ನೋವೆಲೆ ಡಿ ಲಾ ರಿಪಬ್ಲಿಕ್ ಡೆ ಲೆಡರ್ಸ್ ಎಂಬ ಸಾಹಿತ್ಯ ವಿಮರ್ಶೆಯ ಪತ್ರಿಕೆಯ ಸಂಪಾದಕನಾಗಿ ಹೆಸರುಮಾಡಿದ. ಅದರಲ್ಲಿ ಈತ ಬರೆದ ವೈಚಾರಿಕ ಲೇಖನಗಳು ಬಿರುಗಾಳಿಯೆಬ್ಬಿಸಿದವು. ಪತ್ರಿಕೆ ಅತ್ಯಂತ ಜನಪ್ರಿಯವಾಯಿತು. ಈತ ಜನರ ಮೂಢನಂಬಿಕೆ, ಧಾರ್ಮಿಕ ಸಂಪ್ರದಾಯಗಳನ್ನು ಪ್ರಶ್ನಿಸಿ ಅವೆಲ್ಲ ಅರ್ಥರಹಿತವೆಂದು ತಾರ್ಕಿಕವಾಗಿ ಪ್ರತಿಪಾದಿಸಿ ಲೇಖನ ಬರೆದು ಧರ್ಮವಿರೋಧಿ ಎನಿಸಿಕೊಂಡ. 1684ರಲ್ಲಿ ಡೆಕಾರ್ಟೆಯ ತತ್ತ್ವಶಾಸ್ತ್ರವನ್ನು ಕುರಿತ ಒಂದು ಪುಸ್ತಕವನ್ನು 1686ರಲ್ಲಿ ಯೇಸುಕ್ರಿಸ್ತನ ಬಗೆಗೆ ತಾತ್ತ್ವಿಕವಾದ ವಿವೇಚನತ್ಮಕ ಗ್ರಂಥವೊಂದನ್ನು ಬರೆದ. 1684-87ರ ಅವಧಿಯಲ್ಲಿ ನಿಯತಕಾಲಿಕ ಪತ್ರಿಕೆಯೊಂದರ ಸಂಪಾದಕನಾಗಿ ರಾಜಕೀಯ ವಿವಾದದಲ್ಲಿ ಸಿಕ್ಕಿಕೊಂಡು ಅನೇಕರ ವಿರೋಧ ಕಟ್ಟಿಕೊಂಡ. ಇದರಿಂದಾಗಿ 1693ರಲ್ಲಿ ಧರ್ಮಬೋಧನೆಯ ಅನುಮತಿ ಕಳೆದುಕೊಂಡ.

	ಅನಂತರ ಡಿಕ್ಷನೇರ್ ಹಿಸ್ಟೋರಿಕ್ ಎಟ್ ಕ್ರಿಟಿಕ್ ಎಂಬ ನಿಘಂಟಿನ ಕೆಲಸದಲ್ಲಿ ತೊಡಗಿದ. 1692ರಲ್ಲಿ ಅದರ ಕೆಲವು ಭಾಗಗಳು ಪ್ರಕಟವಾಗಿದ್ದುವು. 19697ರಲ್ಲಿ ಮೊದಲ ಸಂಪುಟ ಹೊರಬಂದಿತು. ಧಾರ್ಮಿಕ, ತಾತ್ತ್ವಿಕ ಮತ್ತು ಐತಿಹಾಸಿಕ ವಿಷಯಗಳನ್ನು ಕುರಿತ ವಿವರಣಾತ್ಮಕ ಹಾಗೂ ವಿಮರ್ಶಾತ್ಮಕ ಟಿಪ್ಪಣಿಗಳು ಈ ದೋಶದಲ್ಲಿವೆ. ಒಟ್ಟು ಎರಡು ಸಂಪುಟಗಳು. ಮುಂದೆ 1820ರಲ್ಲಿ ಹೊರತಂದ ಆವೃತ್ತಿಯಲ್ಲಿ ಪಿಯರಿಯ ಟಿಪ್ಪಣಿಗಳೆಲ್ಲವೂ ಸೇರಿಕೊಂಡಂತೆ 16 ಸಂಪುಟಗಳಾಗಿವೆ.

	ಪ್ರತಿ ವಿಷಯದ ಸಾರವನ್ನು ಸಂಗ್ರಹವಾಗಿ ಹೇಳಿ ಅದರ ಕೆಳಗೆ ಟೀಕೆ ಟಿಪ್ಪಣಿ ಬರೆಯುವ ವಿಶಿಷ್ಟ ವಿಧಾನ ಈತ ಅನುಸರಿಸಿದ್ದಾನೆ. ಯಾವುದನ್ನೂ ಸುಲಭವಾಗಿ ಒಪ್ಪದೆ, ಅದನ್ನು ವಿಚಾರದ ಒರೆಗಲ್ಲಿಗೆ ಹಚ್ಚಿ ಪರೀಕ್ಷಿಸುವುದು ಈತನ ಮನೋಧರ್ಮ. ಸಾಹಿತ್ಯ ಮತ್ತು ತತ್ತ್ವ ಶಾಸ್ತ್ರಗಳ ಮೇಲೆ ಈ ಕೃತಿ ಹೆಚ್ಚಿನ ಪ್ರಭಾವ ಬೀರಿದೆ. 18ನೆಯ ಶತಮಾನದ ವಿಚಾರವಾದಕ್ಕೆ ಇದು ನಾಂದಿಯಾಯಿತು. ಮುಂದೆ ವಿಶ್ವಕೋಶದ ರಚನಕಾರರು ಈತನ ಮಾದರಿ ಅನುಸರಿಸಿದರು. ಈ ಕೋಶಕ್ಕೆ ಮುಂಚೆ ಲೂಯಿ ಮೊರೇರಿಯ ಎಂಬಾತನ ಅರ್ಥ ಕೋಶ ಬಂದಿತ್ತಾದರೂ ಪಿಯರಿಯ ರೀತಿ, ದೃಷ್ಟಿಕೋನಗಳೇ ಬೇರೆ ಆದುದರಿಂದ ಈತನ ನಿಘಂಟು ವಿಶಿಷ್ಟ ಎನಿಸಿದೆ. ಈತ ತನ್ನ ಕೊನೆಯ ದಿವಸಗಳಲ್ಲಿ ರಾಜಕೀಯ ವಿವಾದಗಳಿಗೆ ಸಿಲುಕಿ ತೊಂದರೆ ಅನುಭವಿಸಿದ.
(ಕೆ.ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ